“ಈಸಬೇಕು ಇದ್ದು ಜಯಿಸಬೇಕು” ಎನ್ನುವುದು ಎಲ್ಲರ ಬಾಳಿನ ಮಂತ್ರವಾಗಬೇಕು. ಈ ಜಗದಲ್ಲಿ ಎಲ್ಲರೂ ಗೆಲ್ಲಬೇಕು ಎಂಬ ಬಯಕೆ ಹೊಂದಿದವರು. ಹಾಗಾದರೆ ಸೋಲುವವರಾರು! ನಿಜ… ಯಾರೂ ಸಹ ಸೋಲಬೇಕು ಎಂದು ಬಯಸುವುದಿಲ್ಲ. ಸೋಲೆಂಬುದು ಕೆಲವೊಮ್ಮೆ ಆಕಸ್ಮಿಕ ಎನಿಸಿದರೂ ಕೆಲವೊಮ್ಮೆ ನಮ್ಮ ಪರಿಶ್ರಮದ ಕೊರತೆಯಿಂದಾಗುತ್ತದೆ. ಗೆಲ್ಲುವ ಯೋಗ್ಯತೆ ಎಲ್ಲರಲ್ಲೂ ಇರುತ್ತದೆ. ಆದರೆ ಗೆಲ್ಲುವ ಮಾರ್ಗಮಾತ್ರ ಎಲ್ಲರಿಗೂ ಒಂದೇ ಅಲ್ಲ.
ಅಮಂತ್ರಂ ಅಕ್ಷರಂ ನಾಸ್ತಿ ನಾಸ್ತಿ
ಮೂಲಮನೌಷಧಂ;
ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ
ದುರ್ಲಭಃ ||
ಮಂತ್ರವಾಗದ ಅಕ್ಷರಗಳಿಲ್ಲ; ಔಷಧಿಯಾಗದ
ಗಿಡಮೂಲಿಕೆಗಳಿಲ್ಲ; ಯಾವ ವ್ಯಕ್ತಿಯೂ ಅಯೋಗ್ಯನಲ್ಲ; ಆದರೆ ಯೋಜನೆಯನ್ನು ಮಾಡುವವರು ಮಾತ್ರ ವಿರಳ.
ಎಂಬುದು ಈ ಮಂತ್ರದ ಸರಳ ಅರ್ಥವಾಗಿದೆ. ವಿಜಯಲಕ್ಷ್ಮೀ ತನಗೇ ಒಲಿಯಬೇಕೆಂಬುದು ಎಲ್ಲರ ಮಹತ್ವಾಕಾಂಕ್ಷೆ
ಆದರೂ ಸಹ ಎಲ್ಲರಿಗೂ ಒಲಿಯಲಾರಳು ಯಾಕೆ? ಸಂಕಲ್ಪವಿಲ್ಲದ ಗೆಲುವಿನ ಆಕಾಂಕ್ಷೆಯೇ ಇದಕ್ಕೆ ಕಾರಣ. ಸಂಕಲ್ಪ
ಶಕ್ತಿಯಿಂದ ಗೆಲುವಿನ ಮಾರ್ಗವನ್ನಾದರೂ ಕಾಣಬಹುದು.
1 ಯಾವುದೇ ಕಾರ್ಯವನ್ನು ಪ್ರಾರಂಭಿಸುವ
ಮುನ್ನ ನಮ್ಮ ಮನಸ್ಥಿತಿ ಹೇಗಿರಬೇಕು ಎಂದು ತಿಳಿಸುವುದೇ ನಾನು ಹೇಳಲು ಹೊರಟಿರುವ ʼಯಶಸ್ಸಿನ ಹಿಂದೆʼ
ನಾವು
ಎಲ್ಲಾ ಕಾರ್ಯಗಳನ್ನು ಗೆಲ್ಲಲೇಬೇಕು ಎಂದು ಮಾಡಲಾಗುವುದಿಲ್ಲ. ಕೆಲವೊಂದು ಕೆಲಸಗಳು ಉತ್ತಮ ಅನುಭವಕ್ಕಾಗಿ;
ಕೆಲವೊಂದನ್ನು ಸಂತೃಪ್ತಿಗಾಗಿ; ಕೆಲವೊಂದನ್ನು ಕೀರ್ತಿಗಾಗಿ ಮಾಡುತ್ತೇವೆ. ಈಎಲ್ಲಾ ಕೆಲಸವನ್ನು ಮಾಡುವ
ಮುನ್ನ ನಮ್ಮ ಮನದಲ್ಲಿ ಒಂದು ದೃಢವಾದ ನಿರ್ಧಾರವನ್ನು ಕೈಗೊಳ್ಳಬೇಕು. ಇದುವೇ ಸಂಕಲ್ಪ ಶಕ್ತಿ. ಹೀಗೆ
ಮಾಡುವಾಗ ಮನದೊಳಗಿನ ಉದ್ದೇಶ ಮಾತ್ರ ಒಳ್ಳೆಯದಾಗಿರಲಿ. ಸಾಧ್ಯವಾದಲ್ಲಿ ವ್ಯಾಸರು ಹೇಳುವಂತೆ, “ಪರೋಕಾರಾರ್ಥಂ
ಇದಂ ಶರೀರಂ” ಎನ್ನುವಂತಿರಲಿ. ಈ ಸಂದರ್ಭದಲ್ಲಿ ಅನುಭವಿಗಳ, ಹಿರಿಯರ ಮಾರ್ಗದರ್ಶನಗಳನ್ನು ಪಡೆಯುತ್ತಾ
ಗುರಿಯತ್ತ ಸಾಗಬೇಕು. ಇಲ್ಲಿ ಸೂಕ್ಷ್ಮ ಮನಸ್ಥಿತಿ ಅತೀ ಅಗತ್ಯವಾಗಿದೆ. ಅದರ ಜೊತೆಗೆ ಆಕಸ್ಮಿಕವಾಗಿ
ಎದುರಾಗುವ ಸೋಲನ್ನೂ ಸಹ ಗಟ್ಟಿಮನಸ್ಸಿಂದ ಎದುರಿಸಲೂ ಸಹ ಸಿದ್ಧವಾಗಿರಬೇಕು. ಎದೆಗುಂದಬಾರದು. ಈ ಸಂದರ್ಭದಲ್ಲಿ
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ –
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||
ಎಂಬುದು ಅರ್ಥವಾದಾಗ ಸೋತ ವ್ಯಕ್ತಿ ಕುಗ್ಗುವುದಿಲ್ಲ. ಮನದೊಳಗಿನ ಮಹತ್ವಾಕಾಂಕ್ಷೆಯೇ ಸೋತಾಗ ಕುಗ್ಗುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕೂ ನಾವು ಯಶಸ್ಸಿನ ಮೇಲೆ ಅಧಿಕಾರವನ್ನು ಸಾಧಿಸಲು ಹೋಗಬಾರದು. ಹಾಗಾದಾಗಲೇ
ಅನಾಹುತ ಸಂಭವಿಸುವುದು.
*SponsorAChild With Samarth R Bharadwah* Many children come from low-income families are mainly first-generation learners and some are single parent children. Parents are daily wage workers, coolies, house maids, painters, electricians, plumbers, cobblers, construction laborers, migrant workers etc. They are either illiterate or equipped with only basic education. Parents are single earning members with large families, more children and more mouths to feed make expenditure on e... *Read More & Donate Now.* Sponser a child https://ketto.org/s?id=rm-683964 Even a small amount will make a difference.
2 ಇನ್ನು ಗೆದ್ದಾಗ ನಾವು ಹೇಗೆ
ವರ್ತಿಸಬೇಕು ಎನ್ನುವುದೇ ನಾನು ಹೇಳಲು ಹೊರಟಿರುವ ʼಯಶಸ್ಸಿನ ಮುಂದೆʼ
ಜಗತ್ತಿನಲ್ಲಿ ಯಶಸ್ವೀ ವ್ಯಕ್ತಿಗಳು
ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರ ಯಶಸ್ಸಿನ ಹಿನ್ನೆಲೆ ತಿಳಿದಾಗ ಅವರ ಪರಿಶ್ರಮ ನಮಗೆ
ಮೊದಲು ಕಾಣುತ್ತದೆ. ಆದರೆ ನಾವು ಗೆಲುವಿನ ನಂತರ ಅವರೆಲ್ಲ ಹೇಗೆ ಬದುಕಿದ್ದಾರೆ ಎಂದು ಅರಿಯಬೇಕಾಗಿರುವುದು
ಅತೀ ಅವಶ್ಯವಾಗಿದೆ. ಯಾಕೆಂದರೆ ಹಲವಾರು ಮಂದಿ ವಿಜಯ ಹಾಗೂ ವಿನಾಶವನ್ನು ಒಟ್ಟಾಗಿ ಕಂಡವರಿದ್ದಾರೆ.
ʼಸೋಲೇ ಗೆಲುವಿನ ಸೋಪಾನʼ ಎಂಬ ಮಾತಿದೆ. ಹಲವಾರು ಬಾರಿ
ಸೋತು ಕೊನೆಗೊಮ್ಮೆ ಛಲಬಿಡದೇ ಗೆದ್ದರೆ ಅದು ಉತ್ತಮ ಬೆಳವಣಿಗೆ. ಆದರೆ ಗೆದ್ದ ಖುಷಿಯಲ್ಲಿ ಮೈಮರೆತರೆ
ಅದುವೇ ವಿನಾಶ. ನಮಗೆಲ್ಲರಿಗೂ ಪುರಾಣದಲ್ಲಿ ಬರುವ ನಹುಷನ ಕಥೆ ಗೊತ್ತೇ ಇದೆ. ನಹುಷನು ಉತ್ತಮ ಸಾಧನೆಗೈದು ಬ್ರಹ್ಮನಿಂದ ಇಂದ್ರಪದವಿಯನ್ನು
ಪಡೆದುಕೊಂಡನು. ಆದರೆ ನಂತರ ಆ ಪದವಿ ಮತ್ತೆ ತಪ್ಪಿ ಹೋದಾಗ ಆತ ಬಯಸಿದ್ದು ಇಂದ್ರನ ಪತ್ನಿ ಶಚೀದೇವಿಯನ್ನು.
ನಹುಷನನ್ನು ಪಲ್ಲಕ್ಕಿಯಲ್ಲಿ ಮಹರ್ಷಿಗಳೇ ಕೂರಿಕೊಂಡು ಹೋಗುವಾಗ ಗೆಲುವಿನ ಅಹಂಕಾರದಲ್ಲಿ ಮಹರ್ಷಿಗಳನ್ನೇ
ಬಯ್ಯುತ್ತಾನೆ. ಪಲ್ಲಕ್ಕಿಯನ್ನು ಒಯ್ಯುತ್ತಿದ್ದ ಮಹರ್ಷಿಗಳಲ್ಲಿ
ಒಬ್ಬರಾದ ಅಗಸ್ತ್ಯರ ಶಾಪಕ್ಕೆ ತುತ್ತಾಗಬೇಕಾಯಿತು. ಇಲ್ಲಿ ಆತನ ಉದ್ದೇಶ ಒಳ್ಳೆಯದಾಗಿರಲಿಲ್ಲ. ಈ ಕಾರಣದಿಂದ
ವಿನಾಶಕಂಡನು.
ಆದರೆ ಶಾಸ್ತ್ರಾರ್ಥದಲ್ಲಿ ಹಲವಾರು ಪಂಡಿತರನ್ನೇ ಗೆದ್ದಿರುವ ಆದಿಶಂಕರಾಚಾರ್ಯರು
ವಿಜಯದ ಉತ್ತುಂಗದಲ್ಲಿಯೂ ಸಹ ಯಾವುದೇ ಅಹಂಭಾವ ತೋರಲಿಲ್ಲ. ವಿನಯಶೀಲರಾಗಿ ತನ್ನ ಜ್ಞಾನಜ್ಯೋತಿಯನ್ನಷ್ಠೇ
ಬೆಳಗುತ್ತಾ ವಿದ್ಯಾಧಿದೇವತೆಯಾದ ಕಾಶ್ಮೀರದ ಶಾರದೆಯ ದೇಗುಲದ ಬಾಗಿಲನ್ನು ಮತ್ತೆ ತೆರೆಯುವಂತೆ ಮಾಡಿದರು.
ಇಂತಹ ಸಾತ್ವಿಕ ಗುಣ ಸಂಪನ್ನರಾಗಿದ್ದರಿಂದಲೇ ಅವರ ಶಿಷ್ಯಕೋಟಿ ಜಗತ್ತಿನ ಮೂಲೆಮೂಲೆಯಲ್ಲಿದ್ದಾರೆ.
ಇಂತಹ ನೂರಾರು ದೃಷ್ಟಾಂತಗಳಿಂದ
ನಾವು ತಿಳಿಯಬೇಕಾಗಿರುವುದಿಷ್ಟೇ… ವಿದ್ಯೆಯಿಂದ ವಿನಯ; ವಿನಯದಿಂದ ವ್ಯಕ್ತಿತ್ವ; ವ್ಯಕ್ತಿತ್ವದಿಂದ
ಧನ ಸಂಪಾದನೆ; ಧನದಿಂದ ಧರ್ಮ; ಧರ್ಮಮಾರ್ಗದಲ್ಲಿ ಅಂತಿಮವಾಗಿ ಸುಖ ಪ್ರಾಪ್ತಿಯಾಗುವುದು. ಇದು ಮಾನವ
ಜೀವನದ ನಿಜವಾದ ಯಶಸ್ಸು.
**********
ಚರಣ್‌ರಾಜ್ ಯಡಾಡಿ
ಕನ್ನಡ ಶಿಕ್ಷಕರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ